ಕೇರಳದ ವಾಸ್ತುಶಿಲ್ಪ
 
ಕೇರಳದ ವನಸಮೃದ್ಧ ದೇಶ. ಇಲ್ಲಿಯ ವಾಸ್ತು ರಚನೆಗೆ ಉಪಯೋಗಿಸಲಾಗಿರುವ ಮುಖ್ಯವಸ್ತು ಸಹಜವಾಗಿಯೇ ಮರವಾದ್ದರಿಂದ ಇಲ್ಲಿಯ ಬಹುಪ್ರಾಚೀನ ವಾಸ್ತು ರಚನೆಗಳು ಉಳಿದುಬಂದಿಲ್ಲ. ಕೇರಳದಲ್ಲಿ ಸಹಸ್ರಾರು ಹಳೆಯ ದೇವಾಲಯಗಳಿದ್ದರೂ ಎಲ್ಲೋ ಕೆಲವಕ್ಕೆ ಮಾತ್ರ ಸ್ಥಳೀಯ ಶಾಸನಾದಿ ಆಧಾರಗಳಿಂದ ಕಾಲನಿಷ್ಕರ್ಷೆ ಮಾಡಬಹುದು. ಇವುಗಳಲ್ಲೂ ಮರದ ಭಾಗಗಳನ್ನು ಕಾಲಕಾಲಕ್ಕೆ ನವೀಕರಿಸಿರುವ ಸಾಧ್ಯತೆ ಇದೆ. ಇಲ್ಲಿಯ ಅನೇಕ ಕಟ್ಟಡದ ರೀತಿಗಳು ಸ್ಥಳೀಯ ಮಾದರಿಗಳನ್ನೇ ಅನುಕರಿಸಿವೆ. ಈ ಶೈಲಿಯ ಬಗ್ಗೆ ವಿಶೇಷ ಅಧ್ಯಯನ ನಡೆದಿಲ್ಲವಾದ್ದರಿಂದ ಈ ನಾಡಿನ ವಾಸ್ತುಕಲೆಯ ನಿಖರ ಇತಿಹಾಸ ರಚನೆ ಕಷ್ಟ. ಆದರೆ ಪ್ರಕೃತ ದೊರೆಯುವ ಮಾಹಿತಿಗಳಿಂದ ಕೆಲವು ಸ್ಥೂಲ ಅಂಶಗಳನ್ನು ಮಾತ್ರ ನಿರೂಪಿಸಬಹುದು.

	ದೇಗುಲಗಳಿಂದ ಮಾತ್ರ ತಿಳಿದುಬರುವ ಇಲ್ಲಿಯ ಪ್ರಾಚೀನ ವಾಸ್ತುರಚನೆಗಳು ಎರಡು ಶೈಲಿಗಳಲ್ಲಿವೆ. ಒಂದನೆಯದು ಅದೇ ನೆಲದಲ್ಲಿ ಬೆಳೆದು ಬಹುಮಟ್ಟಿಗೆ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಸೀಮಿತವಾದ ಕೇರಳ ಶೈಲಿ. ಎರಡನೆಯದು ಪಕ್ಕದ ತಮಿಳುನಾಡಿನ ಪ್ರಭಾವದಿಂದ ಬೆಳೆದ ದ್ರಾವಿಡ ಶೈಲಿ. ದ್ರಾವಿಡ ಶೈಲಿಯ ಕಟ್ಟಡಗಳು, ಈಗ ತಿಳಿದಿರುವಂತೆ, ತಿರುವನಂತಪುರ ಜಿಲ್ಲೆಗಷ್ಟೇ ಸೀಮಿತವಾಗಿವೆ. ಇವುಗಳಲ್ಲಿ ಮುಖ್ಯವಾದವು ವಿಳಿಂಜಂ ಎಂಬಲ್ಲಿವೆ. ಒಂಬತ್ತನೆಯ ಶತಮಾನದ ಈ ಗುಡಿಗಳಲ್ಲಿ ಚಚ್ಚೌಕದ ತಳವಿನ್ಯಾಸವಿರುತ್ತದೆ. ಕಾಲೆಯ ಪಟ್ಟಿ ಮುಂತಾದವು ಪ್ರಾಚೀನ ಚೋಳ ದೇವಾಲಯಗಳ ಮಾದರಿಯಲ್ಲಿವೆ. ಇವುಗಳ ಅಧಿಷ್ಠಾನ ಕಂಬಗಳು, ಅರೆಗಂಬಗಳು ಚಾವಣಿಕಲ್ಲಿನವು. ಆದರೆ ಗೋಡೆ ಮತ್ತು ಮೇಲಿನ ಗೋಪುರ ಇಟ್ಟಿಗೆಯವು. ವಿನ್ಯಾಸದಲ್ಲಿ ಕೇವಲ ಗರ್ಭಗೃಹ ಮತ್ತು ಅರ್ಧಮಂಟಪ, ಇಲ್ಲವೇ ಅರ್ಧಮಂಟಪ ಮಾತ್ರ, ಇರುವುದುಂಟು. ನಿರಮಂಕರ ಎಂಬಲ್ಲಿ ವೃತ್ತಾಕಾರದ ದ್ರಾವಿಡಶೈಲಿಯ ದೇವಾಲಯವೊಂದಿದೆ. ಅಧಿಷ್ಠಾನ ಮತ್ತು ಭಿತ್ತಿ ದ್ರಾವಿಡ ರೀತಿಯದಾದರೂ ಈ ವೃತ್ತತಳ ವಿನ್ಯಾಸ ಸ್ಥಳೀಯ ಕೇರಳರೀತಿಯದೇನೋ ಎನ್ನಿಸುತ್ತದೆ. ನಿರಮಂಕರ ಗುಡಿಯ ಈ ವಿನ್ಯಾಸ ಹೊರಗೋಡೆಗಳಷ್ಟೇ ಸೀಮಿತವಾಗಿದ್ದು, ಇದರ ಒಳಭಾಗದ ಶ್ರೀಕೋಯಿಲ್ ಚೌಕವಾಗಿಯೇ ಇರುವುದಲ್ಲದೆ, ಪೂರ್ಣ ದ್ರಾವಿಡ ರೀತಿಯ ಇಟ್ಟಿಗೆಯ ಚೌಕ ಗೋಪುರವನ್ನೂ ಹೊಂದಿದೆ. ನಿರಮಂಕರ ಗುಡಿ ಪ್ರಾಯಶ: ಕೇರಳ-ದ್ರಾವಿಡ ಮಿಶ್ರಶೈಲಿಯಲ್ಲಿದೆ.

	ಕೇರಳದಲ್ಲಿ ಪೂರ್ಣ ಕೇರಳೀಶೈಲಿಯ ಗುಡಿಗಳೇ ಹೆಚ್ಚು. ಕೇರಳದ ಗುಡಿಗಳಲ್ಲಿ ವಿಶಾಲ ಪ್ರದೇಶದಲ್ಲಿ ಒಂದು ಅಥವಾ ಅದಕ್ಕೂ ಹೆಚ್ಚಿನ ಪ್ರಾಕಾರ (ನಾಲಂಬಲಮ್) ಮತ್ತು ಮಧ್ಯದಲ್ಲಿ ಮುಖ್ಯಗುಡಿ ಶ್ರೀಕೋಯಿಲ್ ಇರುತ್ತವೆ. ಗುಡಿಗಳಲ್ಲಿ ಸಾಮಾನ್ಯವಾಗಿ ಒಂದೇ ಶ್ರೀಕೋಯಿಲ್ ಇರುವುದಾದರೂ ಹೆಚ್ಚು ಇರುವ ಉದಾಹರಣೆಗಳೂ ಉಂಟು. ಗುಡಿಗಳು ಅಷ್ಟೇನೂ ಎತ್ತರವಿರುವುದಿಲ್ಲ. ಈ ದೇಗುಲಗಳ ಅಧಿಷ್ಟಾನ ಸಾಮಾನ್ಯವಾಗಿ ಗ್ರಾನೈಟ್ ಕಲ್ಲಿನದು. ಮೇಲಿನ ಭಿತ್ತಿ ಹೆಚ್ಚಾಗಿ ಜಂಬಿಟ್ಟಿಗೆಯದು. ಮೇಲೆ ಗಾರೆ ಹಚ್ಚಿ ಅದನ್ನು ಅನೇಕ ವರ್ಣಚಿತ್ರಗಳಿಂದ ಅಲಂಕರಿಸಿರುತ್ತದೆ. ಮೇಲ್ಚಾವಣಿ ಮರದಲ್ಲಿ ಮಾಡಲಾಗಿದ್ದು, ಮೇಲೆ ಹೆಂಚು ಅಥವಾ ತಾಮ್ರದ ತಗಡುಗಳನ್ನು ಹೊದಿಸಲಾಗಿರುತ್ತದೆ. ನಾಲಂಬಲದ ತಳವಿನ್ಯಾಸ ಸಾಮಾನ್ಯವಾಗಿ ಚೌಕ. ಒಳಗಿನ ಶ್ರೀಕೋಯಿಲ್ ಚೌಕ ಅಥವಾ ಗಜಪೃಷ್ಠ ಅಥವಾ ವೃತ್ತಾಕಾರವಾಗಿರಬಹುದು. ಕಲ್ಲಿನ ಅಧಿಷ್ಠಾನದ ಮೇಲೆ ಎತ್ತಿರುವ ಶ್ರೀಕೋಯಿಲ್‍ಗಳ ಒಳಭಾಗದಲ್ಲಿ ಸಾಮಾನ್ಯವಾಗಿ ಒಂದು ಗರ್ಭಗುಡಿಯಿದ್ದು, ಅದರ ಸುತ್ತಲ ಭಾಗ ಪ್ರದಕ್ಷಿಣೆಗೆ ಮೀಸಲಾಗಿರುತ್ತದೆ. ಈ ಭಾಗದಲ್ಲಿ ಕೆಲವು ವೇಳೆ ಕಂಬಗಳಿರುವುದೂ ಉಂಟು. ತಳವಿನ್ಯಾಸಕ್ಕೆ ಹೊಂದಿಕೊಂಡಂತೆ ಚೌಕ, ಗಜಪೃಷ್ಠ ಅಥವಾ ವೃತ್ತಾಕಾರದಲ್ಲಿ, ಇಳಿಜಾರಾಗಿ ಮೇಲಿನ ಚಾವಣಿಯನ್ನು ನಿರ್ಮಿಸಲಾಗಿದ್ದು, ತಳದ ಕುಳ್ಳು ದೇವಾಲಯವನ್ನು ದೊಡ್ಡ ಟೋಪಿಯಿಂದ ಕವುಚಿದಂತಿರುತ್ತದೆ. ಈ ಚಾವಣಿ ಸಹ ಒಂದು ಅಥವಾ ಎರಡು ಘಟ್ಟಗಳಲ್ಲಿ ಮೇಲೇರಿರುವುದುಂಟು. ಎರಡು ಘಟ್ಟಗಳಿದ್ದಲ್ಲಿ ಮೊದಲನೆಯದರ ಮತ್ತು ಎರಡನೆಯದರ ಮಧ್ಯೆ ಸ್ವಲ್ಪ ಎತ್ತರದ ನೇರ ಭಿತ್ತಿಯಿದ್ದು ಶಿಲ್ಪಗಳಿಂದ ಅಲಂಕೃತವಾಗಿರುತ್ತದೆ. ಈ ಚಾವಣಿಯ ಹೆಂಚು ಅಥವಾ ತಾಮ್ರದ ತಗಡಿನಿಂದ ಮುಚ್ಚಲಾದ ಮೇಲ್ಭಾಗ ಸಾಮಾನ್ಯ ರೀತಿಯದಾಗಿದ್ದರೂ ಒಳಭಾಗದಲ್ಲಿ ಉಪಯೋಗಿಸಿರುವ ಮರದ ಭಾಗಗಳು ಸುಂದರವಾದ ಕೆತ್ತನೆಗಳಿಂದ ಅಲಂಕೃತವಾಗಿರುತ್ತದೆ. ಶ್ರೀಕೋಯಿಲಿನ ಎದುರಿಗೆ ಒಂದು ನಮಸ್ಕಾರ ಮಂಟಪ ಇರುವುದೂ ಉಂಟು. ಇದು ಸಾಮಾನ್ಯವಾಗಿ ಕಂಬದ ಮೇಲೆ ಎತ್ತಿದ ಮಂಟಪವಾಗಿರುತ್ತದೆ. ಮೇಲೆ ಪಿರಮಿಡಿನಾಕಾರದ ಚಾವಣಿಯಿಂದ ಆವೃತವಾಗಿರುತ್ತದೆ. ಇಲ್ಲೂ ಬಹು ಸುಂದರವಾದ ಮರದ ಕೆತ್ತನೆಗಳು, ಭುವನೇಶ್ವರಿ ಮತ್ತು ಕಂಬಗಳು ಇರುತ್ತವೆ.

	ಕೇರಳದ ಈ ವಾಸ್ತುಕಲೆ ಮೂಲತ: ಸ್ಥಳೀಯ ಪ್ರಾಚೀನ ಗೃಹಗಳ ಮಾದರಿಯಲ್ಲಿಯೇ ಇದ್ದು, ಅದರ ವಿನ್ಯಾಸ ಮತ್ತು ಅಲಂಕರಣ ಆ ಪ್ರದೇಶದ ಪ್ರಾಕೃತಿಕ ವಾತಾವರಣದಿಂದ ಪ್ರಭಾವಿತವಾಗಿದ್ದು ವೈಶಿಷ್ಟ್ಟ್ಯಪೂರ್ಣವಾಗಿದೆಯೆಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಇಲ್ಲಿಯ ಎರಡು ಅಥವಾ ಮೂರು ಅಂತಸ್ತುಗಳಲ್ಲಿ ಏರುವ ಇಳಿಜಾರು ಚಾವಣಿಗಳ ವಿನ್ಯಾಸಕ್ಕೂ ಚೀನ, ನೇಪಾಳ, ಟಿಬೆಟ್‍ಗಳಲ್ಲಿ ಕಾಣಬರುವ ವಿನ್ಯಾಸಕ್ಕೂ ಹೋಲಿಕೆ ಇರುವುದರಿಂದ ಆ ಪ್ರದೇಶದ ವಾಸ್ತುಕಲೆಯ ಪ್ರಭಾವ ಕೇರಳದಲ್ಲಿ ಬಿಂಬಿತವಾಗಿರಬಹುದೆಂಬ ಹೇಳಿಕೆಯೂ ಇದೆ. ಆದರೆ ಈ ವಿಷಯದಲ್ಲಿ ಸರ್ವಾನುಮತವಿಲ್ಲ.

	ಕೇರಳ ಶೈಲಿಯ ಅತ್ಯಂತ ಪ್ರಾಚೀನ ದೇವಾಲಯಗಳು ಪಾಲಕ್ಕಾಡು ಜಿಲ್ಲೆಯ ಗೋದಪುರಂ ಮತ್ತು ಪೊಲ್ಪುಲ್ಲಿಗಳಲ್ಲಿವೆ. ಇವುಗಳ ಕಾಲ ಸು.10ನೆಯ ಶತಮಾನ. ಇವೆರಡರಲ್ಲೂ ಶಿಲಾರಚಿತ ಕೆಳಭಾಗಗಳು ಮಾತ್ರ ಉಳಿದಿವೆ. ಗುರುವಾಯೂರಿನ ಕೃಷ್ಣ, ತಿರುವಂಚಿಕುಲಮ್‍ನ ಶಿವ, ತ್ರಿಚೂರಿನ ವಡಕ್ಕನಾಥ, ತಿರುವನಂತಪುರದ ಅನಂತಪದ್ಮನಾಭ ಮುಂತಾದ ಪ್ರಸಿದ್ಧ ದೇವಾಲಯಗಳು 16-18ನೆಯ ಶತಮಾನಗಳ ಕಾಲದಲ್ಲಿ ಕಟ್ಟಿದವಾಗಿರಬಹುದು. ಪ್ರಕೃತ ದೊರೆಯುವ ಮಾಹಿತಿಗಳಿಂದ ಈ ಶೈಲಿಯ ಬೆಳವಣಿಗೆಯ ಘಟ್ಟಗಳನ್ನು ಗುರುತಿಸಲು ಸಾಧ್ಯವಾಗದಾದರೂ ಕೇರಳದ ಮೊದಮೊದಲ ದೇವಾಲಯಗಳಲ್ಲಿ ಚೌಕದ ನಾಲಂಬಲದಿಂದ ಆವೃತವಾದ ಪ್ರಾಂಗಣದ ಮಧ್ಯೆ ಚೌಕ, ವೃತ್ತ ಅಥವಾ ಗಜಪೃಷ್ಠಾಕಾರದ ಶ್ರೀಕೋಯಿಲ್ ಮಾತ್ರ ಇರುತ್ತಿತ್ತೆಂದೂ ಶ್ರೀಕೋಯಿಲನ ಒಳಗೆ ಮತ್ತೊಂದು ಗರ್ಭಗೃಹವನ್ನು ನಿರ್ಮಿಸುವ ಪದ್ಧತಿ 12ನೆಯ ಶತಮಾನದ ಹೊತ್ತಿಗೆ ಬೆಳೆಯಿತೆಂದೂ ಕೆಲವು ಆಧಾರಗಳಿಂದ ಊಹಿಸಲಾಗಿದೆ. ಕೇರಳದ ಬಹುಭಾಗದಲ್ಲಿ ಈ ವಿನ್ಯಾಸವೇ ಇನ್ನೂ ಪ್ರಚಲಿತವಾಗಿದೆ. ಆದರೆ ದಕ್ಷಿಣದ ತಿರುವನಂತಪುರ ಜಿಲ್ಲೆಯಲ್ಲಿ ಆಗಾಗ್ಗೆ ಅನೇಕ ದ್ರಾವಿಡ ಅಂಶಗಳು ಸೇರ್ಪಡೆಯಾದುವು. ಉದಾಹರಣೆಗೆ ಈಗಿನ ತಿರುವನಂತಪುರದ ಅನಂತಪದ್ಮನಾಭ ದೇವಾಲಯದ ಒಳಮಂಟಪ ಮತ್ತು ಮುಂದಿನ ದ್ವಾರದ ಮೇಲಿರುವ ಇಟ್ಟಿಗೆಯ ಕುಳ್ಳುಗೋಪುರ ಈ ಪ್ರಭಾವದಿಂದ ನಿರ್ಮಿತವಾದವು.

	ಪಶ್ಚಿಮದಿಂದ ವಲಸೆ ಬಂದ ಕ್ರೈಸ್ತರು, ಮುಸಲ್ಮಾನರು ಕೇರಳದ ಕರಾವಳಿ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ನೆಲಸಿ ತಮ್ಮದೇ ಶೈಲಿಯ ಧಾರ್ಮಿಕ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಅಂಥ ಕಟ್ಟಡಗಳ ಪ್ರಾಚೀನತೆ ಮತ್ತು ಶೈಲಿಯ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ. ಕ್ರಾಂಗನೂರು ಬಳಿಯ ಕೊತ್ತಪುರಂನಲ್ಲಿರುವ ಇಗರ್ಜಿಯನ್ನು ಕ್ರಿಸ್ತಶಕ 52ರಲ್ಲಿ ಕಟ್ಟಲಾಯಿತೆಂಬ ಹೇಳಿಕೆಯಿದ್ದರೂ ಈಗಿರುವ ಕಟ್ಟಡದ ಕಾಲವನ್ನು ಖಚಿತವಾಗಿ ಹೇಳುವುದು ಕಷ್ಟ. ಕೋಳಿಕ್ಕೋಡಿನಲ್ಲಿರುವ ಸುಂದರವಾದ ರೋಮನ್ ಕೆಥೊಲಿಕ್ ಇಗರ್ಜಿ 1750ರಲ್ಲಿ ಪೋರ್ಚುಗೀಸರು ಕಟ್ಟಿದ್ದು. ಮಲಬಾರಿನ ಮಾದಾಯಿಯಲ್ಲಿರುವ ಮಸೀದಿ 1124ರೆಂದು ತಿಳಿಯುತ್ತದೆ. ಹಾಗೆಯೇ ಮಂಜೇರಿ, ಮಲಪ್ಪರಂ ಮುಂತಾದೆಡೆ ಪ್ರಾಚೀನ ಮಸೀದಿಗಳೂ ತಲಚ್ಚೇರಿ, ಕೋಳಿಕ್ಕೋಡ್, ಕೊಚ್ಚಿಗಳಲ್ಲಿ ಹಳೆಯ ಇಗರ್ಜಿಗಳೂ ಉಳಿದಿವೆ. 7-8ನೆಯ ಶತಮಾನದಿಂದಲೂ ಕೇರಳದಲ್ಲಿ ನೆಲಸಿದ್ದ ಯಹೂದ್ಯರ ಸ್ಪೆನಗೋಗ್‍ಗಳು ಸಹ ಕೊಚ್ಚಿಯ ಸುತ್ತಮುತ್ತ ಅನೇಕವಿವೆ. ಸುಂದರವಾದ ಒಳ ಅಲಂಕರಣವುಳ್ಳ ಒಂದು ಸ್ಪೆನಗೋಗ್ ಕೊಚ್ಚಿಯಲ್ಲಿದೆ. ಇದು 1730ರಲ್ಲಿ ಸ್ಪೇನಿನಿಂದ ಬಂದ ಎಜೆಕೀಲ್ ರಹಬಿ ಎಂಬ ಯೆಹೂದ್ಯ ಕಟ್ಟಿದ್ದು.

	ಕೇರಳದ ಹಿಂದೂ ಆಳ್ವಿಕೆಗೆ ಸಂಬಂಧಿಸಿದ ಕೋಟೆ ಕೊತ್ತಲಗಳಾವುವೂ ಉಳಿದು ಬಂದಿಲ್ಲ. ಕೋಳಿಕ್ಕೋಡ್ ಜಾಮೊರಿನನ ಅರಮನೆಯ ಕೆಲವು ಉಳಿಕೆಗಳಿವೆ. ಕೊಚ್ಚಿ ಮತ್ತು ತಿರುವನಂತಪುರಗಳಲ್ಲಿ ಉಳಿದು ಬಂದಿರುವ ಅರಮನೆಗಳು ಈಚಿನವು. ಅಲ್ಲಿ, ಕೇರಳೀಯ ಮತ್ತು ಪಾಶ್ಚಾತ್ಯ ಶೈಲಿಯ ಕಟ್ಟಡಗಳಿವೆ. ಪೋರ್ಚುಗೀಸರು ಕಟ್ಟಿದ ಕೋಟೆಗಳಲ್ಲಿ ಕೊತ್ತಪುರಂ (1523), ಕಣ್ಣನ್ನೂರಿನ ಅಂಗೆಲೋಕೋಟೆ (1505) ಇವನ್ನು ಹೆಸರಿಸಬಹುದು. ಡಚ್ಚರ ಚೆತ್ತುವಿ (1729), ಕೊಚ್ಚಿ, ಬ್ರಿಟಿಷರ ತಲಚ್ಚೇರಿ (1708), ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರ ತ್ರಿಚೂರ್ (1774), ಪಾಲಕ್ಕಾಡು (1766), ಫೆರೋಕಾಬಾದ್ (1788)-ಇವು ಕೇರಳದಲ್ಲಿ ಉಳಿದು ಬಂದಿರುವ ಇತರ ಮುಖ್ಯಕೋಟೆಗಳು.            			
	(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ